ಲಾಮರ್ಟೀನ್, ಅಲ್‍ಫೋನ್ಸ್ ಡೆ
1790-1869. ಫ್ರಾನ್ಸಿನ ಪ್ರಖ್ಯಾತ ಕವಿ ಹಾಗೂ ರಾಜಕೀಯ ಧುರೀಣ. ಫ್ರಾನ್ಸಿನಲ್ಲಿ ರೊಮ್ಯಾಂಟಿಕ್ ಸಂಪ್ರದಾಯ ಬೆಳೆಯುವಲ್ಲಿ ಪ್ರಮುಖಪಾತ್ರ ವಹಿಸಿದವ. ಈತ ಮಾಕನ್ ಎಂಬಲ್ಲಿ ಶ್ರೀಮಂತ ಮನೆತನವೊಂದರಲ್ಲಿ ಜನಿಸಿ, ಗ್ರಾಮೀಣ ಪರಿಸರದಲ್ಲಿ ಬೆಳೆದ. ಇದು ಮುಂದೆ ಇವನ ಸಾಹಿತ್ಯ ಕೃತಿಗಳ ಮೇಲೆ ಪ್ರಭಾವ ಬೀರಿತು.
  
ಪೊಯಿಟಿಕ್ ಮೆಡಿಟೇಷನ್ಸ್ ಎಂಬುದು ಇವನ ಮೊದಲ ಕವನ ಸಂಕಲನ (1820). ಇದು ಇವನಿಗೆ ಅಪಾರ ಖ್ಯಾತಿ ತಂದುಕೊಟ್ಟಿತು. ಇಲ್ಲಿಯ ಕವಿತೆಗಳಲ್ಲಿ ಗತಕಾಲದ ಬಗ್ಗೆ ಹಂಬಲ, ಆದರ್ಶ ಪ್ರೇಮದ ನೆನಪುಗಳು, ಧಾರ್ಮಿಕತೆಯಲ್ಲಿ ನಂಬಿಕೆ ಮುಂತಾದ ಸಂಗತಿಗಳು ಅಭಿವ್ಯಕ್ತಿ ಪಡೆದುಕೊಂಡಿವೆ. ನೊವಿಲ್ಲಸ್ ಮೆಡಿಟೇಷನ್ಸ್, ಹಾರ್ಮೊನೀಸ್, ಜೊಸಿಲೀನ್ (1836), ಫಾಲ್ ಆಫ್ ಎನ್ ಏಂಜಲ್(1838)-ಇವು ಇವನ ಇತರ ಕವನ ಸಂಕಲನಗಳು. ಯಾತನೆ ಹಾಗೂ ಪ್ರಾಯಶ್ಚಿತ್ತಗಳ ಮೂಲಕ ದೇವರ ಸಾಮೀಪ್ಯ ಹೊಂದಲು ಮನುಷ್ಯ ನಡೆಸುವ ಹೋರಾಟವನ್ನು ಈತ ತನ್ನ ಅನೇಕ ಕವಿತೆಗಳಲ್ಲಿ ಸಾಂಕೇತಿಕವಾಗಿ ಚಿತ್ರಿಸಿದ್ದಾನೆ.
	
ಈತ ರಾಜಕೀಯ ರಂಗದಲ್ಲಿಯೂ ಕ್ರಿಯಾತ್ಮಕವಾಗಿ ದುಡಿದಿದ್ದಾನೆ. ಫ್ರಾನ್ಸಿನ ರಾಜತಾಂತ್ರಿಕ ಹುದ್ದೆಯಲ್ಲಿ ಈತ ಕೆಲಕಾಲ ಸೇವೆಸಲ್ಲಿಸಿದ. ಮೆರಿಯಾನ್ ಬರ್ಚ್ ಎಂಬ ಆಂಗ್ಲ ಮಹಿಳೆ ಯನ್ನು 1823ರಲ್ಲಿ ವಿವಾಹ ವಾದ. 1824ರಲ್ಲಿ ಪ್ರತಿನಿಧಿ ಸಭೆಗೆ ಚುನಾಯಿತನಾದ. 1848ರ ಫೆಬ್ರುವರಿ ಕ್ರಾಂತಿಯಲ್ಲಿ ಹಂಗಾಮಿ ಸರ್ಕಾರಕ್ಕೆ ಬೆಂಬಲ ನೀಡಿ ಕಾರ್ಯ ನಿರ್ವಾಹಕ ಮಂಡಳಿಯ ಸದಸ್ಯನಾದ. 1849ರಲ್ಲಿ ಅಧ್ಯಕ್ಷ ಪದವಿಗೆ ಸ್ಪರ್ಧಿಸಿ ಪರಾಜಿತನಾದ. ತನ್ನ ಜೀವನ ಸಂಧ್ಯಾ ಸಮಯದಲ್ಲಿ ಈತ ಕಡುಬಡತನಕ್ಕೆ ಗುರಿಯಾದ. ಜನಪ್ರಿಯತೆ ಕಳೆದುಕೊಂಡ; ಸಾಲಸೋಲಗಳಿಂದ ಜಜ್ಜರಿತನಾದ. ಇಂಥ ಸಂದರ್ಭದಲ್ಲಿ ಮೂರನೆಯ ನೆಪೋಲಿಯನ್‍ನ ಸರ್ಕಾರ ಈತನಿಗೆ 20,000 ಪೌಂಡುಗಳ ಸಹಾಯಧನ ನೀಡಿತೆಂದು ತಿಳಿದುಬರುತ್ತದೆ.	
(ಎಚ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ